ಕದಂಬರ ವಾಸ್ತು, ಶಿಲ್ಪ, ಶಾಸನಗಳು ಮತ್ತು ನಾಣ್ಯಗಳು : ಆದ್ಯಕದಂಬರೂ ಅನಂತರ ಬಂದವರೂ ಕರ್ಣಾಟಕದ ವಾಸ್ತುಶಿಲ್ಪಕ್ಕೆ ತಮ್ಮವೇ ಅದ ಕೊಡುಗೆಗಳನ್ನಿತ್ತಿದ್ದಾರೆಂಬ ವಿಷಯ ಅವರ ಅನೇಕ ಶಾಸನಗಳಿಂದ ವ್ಯಕ್ತವಾಗುತ್ತದೆ. ಕಾಕುತ್ಸ್ಥವರ್ಮನ ತಾಳಗುಂದ ಶಾಸನದಲ್ಲಿ (ಪ್ರ.ಶ. ಸು. 450) ಆ ಊರಿನ ಮಹಾದೇವ ದೇವಾಲಯದ ಉಲ್ಲೇಖವಿದೆ. ಕಾಕುತ್ಸ್ಥನ ಮೊಮ್ಮಗನಾದ ಮೃಗೇಶ ಪಲಾಸಿಕ ಎಂಬಲ್ಲಿ ಒಂದು ಜೈನಬಸದಿ ಕಟ್ಟಿಸಿದನೆಂದು ಅವನ ಒಂದು ತಾಮ್ರಶಾಸನ ತಿಳಿಸುತ್ತದೆ. ಅನಂತರದ ಕದಂಬ ಅರಸರ ಆಳ್ವಿಕೆಯ ಕಾಲದಲ್ಲಿ ದೇಗಾಂವೆ, ಕದರೋಲಿ, ಹಾನುಗಲ್ಲು ಮುಂತಾದ ಊರುಗಳಲ್ಲಿ ದೇವಾಲಯಗಳು ನಿರ್ಮಿತವಾದುವೆಂಬ ವಿಷಯ ಸಮಕಾಲೀನ ಶಾಸನಗಳಲ್ಲಿ ಉಕ್ತವಾಗಿವೆ.
ಆದರೆ ಮೊದಲ ಕದಂಬ ಅರಸರ ಕಾಲಕ್ಕೆ ಖಚಿತವಾಗಿ ಸೇರಿದ ಕಟ್ಟಡಗಳನ್ನು ಗುರುತಿಸಿಲ್ಲವಾದ್ದರಿಂದ, ಅಂದಿನ ದೇವಾಲಯಗಳ ಸ್ವರೂಪವೇನು, ಭಾರತೀಯ ವಾಸ್ತುಶಿಲ್ಪ ಪರಂಪರೆಯಲ್ಲಿ ಅವುಗಳ ಸ್ಥಾನವೇನು ಎಂಬ ಮುಖ್ಯ ವಿಷಯಗಳು ತಿಳಿಯುವಂತಿಲ್ಲ. ದಕ್ಷಿಣ ಭಾರತದಲ್ಲಿ ಶಿಲಾದೇವಾಲಯಗಳ ರಚನಾ ಸಂಪ್ರದಾಯ ಪ್ರ.ಶ. ಸು. 5-6ನೆಯ ಶತಮಾನಗಳಲ್ಲಿ ಬಾದಾಮಿಯ ಚಾಳುಕ್ಯ ಮತ್ತು ಕಂಚಿಯ ಪಲ್ಲವ ಅರಸರ ಆಶ್ರಯದಲ್ಲಿ ವಿಶೇಷವಾಗಿ ಬೆಳೆಯಿತೆಂದು ಎಲ್ಲ ವಿದ್ವಾಂಸರೂ ಹೇಳುತ್ತಾರೆ. ಹಾಗಿದ್ದಲ್ಲಿ ಬನವಾಸಿಯ ಕದಂಬರ ಕಾಲದ ದೇವಾಲಯಗಳು ಮರ ಅಥವಾ ಇಟ್ಟಿಗೆಯಲ್ಲಿ ಕಟ್ಟಿದವುಗಳಾಗಿರಬೇಕು. ಶಿಲಾದೇವಾಲಯಗಳಿದ್ದುದೇ ಆದರೆ, ಚಾಳುಕ್ಯ ಮತ್ತು ಪ್ರಾಯಶಃ ಪಲ್ಲವ ಶೈಲಿಗೆ ಕೂಡ ಮೂಲ ಮಾದರಿಗಳನ್ನು ಇವು ಒದಗಿಸಿರಬಹುದು. ಈಗ ತಾಳಗುಂದದಲ್ಲಿ ಕದಂಬ ಶಾಸನಗಳಲ್ಲಿ ಹೆಸರಿಸಿರುವ ಪ್ರಣವೇಶ್ವರ ದೇವಾಲಯವೆಂಬುದೊಂದಿದ್ದರೂ ಅದು ಇತ್ತೀಚೆಗೆ ಬಹುವಾಗಿ ನವೀಕರಿಸಲ್ಪಟ್ಟಿದ್ದು, ಸ್ಪಷ್ಟಪ್ರಾಚೀನ ಅಂಶಗಳನ್ನೇನನ್ನೂ ಉಳಿಸಿ ಕೊಂಡಿಲ್ಲ. ಮೊದಲ ಕದಂಬರ ರಾಜಧಾನಿಯಾದ ಬನವಾಸಿಯಲ್ಲಿ ಅವರ ಕುಲದೈವ ಮಧುಕೇಶ್ವರನ ಗುಡಿ ಇದೆ. ಈಗ ಇರುವ ಕಟ್ಟಡದ ಮುಂಭಾಗವೆಲ್ಲಾ 12ನೆಯ ಶತಮಾನದ್ದು. ಮೂಲ ದೇವಾಲಯ, ಅಂದರೆ ಗರ್ಭಗುಡಿ, ಸುತ್ತಿರುವ ಪ್ರದಕ್ಷಿಣಪಥ ಮತ್ತು ಒಳಮಂಟಪ ಹಳೆಯವು. ಆದರೆ ಇವುಗಳ ವಾಸ್ತು ವಿನ್ಯಾಸ ಮತ್ತು ಕಂಭಗಳ ರಚನೆಗಳು ಪಟ್ಟದಕಲ್ಲಿನ ವಿರೂಪಾಕ್ಷದೇವಾಲಯವೇ ಮುಂತಾದ 8ನೆಯ ಶತಮಾನದ ಕಟ್ಟಡಗಳ ಮಾದರಿ ಯಲ್ಲಿರುವುದರಿಂದ, ಈ ಗುಡಿಯೂ ಅದೇ ಕಾಲಕ್ಕೆ ಸೇರಿದ್ದೆಂದು ಹೇಳಬಹುದು. ಮೊದಲ ಕದಂಬ ಅರಸರ ಆಳ್ವಿಕೆ ಪುರ್ಣವಾಗಿ ಕೊನೆಗೊಂಡಿದ್ದು ಆ ಕಾಲದಲ್ಲಿ. ಬನವಾಸಿ ಪ್ರಾಂತ್ಯ ಚಾಳುಕ್ಯರ ಅಧೀನದಲ್ಲಿತ್ತಾದ್ದರಿಂದ ಈಗಿನ ಬನವಾಸಿಯ ಮೂಲಗುಡಿ ಸಹ ಕದಂಬರ ಕೊಡುಗೆಯೆಂದು ಹೇಳುವುದು ಕಷ್ಟ.

ಧಾರವಾಡ ಜಿಲ್ಲೆಯ ಹಲ್ಸಿಯಲ್ಲಿ ಕೆಲವು ಪ್ರಾಚೀನ ದೇವಾಲಯಗಳಿವೆ. ಶೈಲಿಯ ದೃಷ್ಟಿಯಿಂದ ನೋಡುವುದಾದರೆ ಇಲ್ಲಿಯ ಜೈನಬಸದಿ ಅತ್ಯಂತ ಹಳೆಯದು. ಇದರಲ್ಲಿ ಗರ್ಭಗೃಹ ಮತ್ತು ಸುಖನಾಸಿ ಮಾತ್ರ ಇವೆ. ಸುಖನಾಸಿ ಗರ್ಭಗೃಹಕ್ಕಿಂತ ದೊಡ್ಡದು. ದೊಡ್ಡ ದೊಡ್ಡ ಒರಳುಕಲ್ಲುಗಳನ್ನು ಪೇರಿ ಗೋಡೆಗಳನ್ನು ಏರಿಸಲಾಗಿದೆ. ದೇವಾಲಯದಲ್ಲಿ ಯಾವ ರೀತಿಯ ಅಲಂಕರಣವೂ ಇಲ್ಲ. ನಯನಾಜೂಕಿಲ್ಲದೆ ಕಟ್ಟಿರುವ ಈ ಕಟ್ಟಡ ಪ್ರಾಯಶಃ ದಕ್ಷಿಣ ಭಾರತದ ಶಿಲಾಕಟ್ಟಡಗಳ ರಚನೆಯಲ್ಲಿ ಪ್ರಾರಂಭಿಕ ಘಟ್ಟದ್ದೆಂದು ಹೇಳಬಹುದು. ಇಲ್ಲಿ ಯಾವ ಶಾಸನಗಳೂ ದೊರಕಿಲ್ಲವಾದ್ದರಿಂದ ಇದರ ಕಾಲನಿರ್ದೇಶ ಕಷ್ಟ. ಆದರೆ ಮೃಗೇಶವರ್ಮನ ತಾಮ್ರಪಟದಲ್ಲಿ ಉಲ್ಲೇಖಿಸಿರುವ ಜೈನಬಸದಿ ಇದೇ ಆದರೆ ಇದು ಅವನ ಕಾಲದ್ದೆಂದು ಹೇಳಬಹುದು. ಹಾಗಿದ್ದಲ್ಲಿ ಈ ದೇವಾಲಯವೇ ಕರ್ನಾಟಕದಲ್ಲಿ ಉಳಿದು ಬಂದಿರುವ ಅತ್ಯಂತ ಪ್ರಾಚೀನ ಶಿಲಾಕಟ್ಟಡವಾಗುತ್ತದೆ.

ಕರ್ನಾಟಕದ ವಾಸ್ತುಶಿಲ್ಪ ಪರಂಪರೆಯಲ್ಲಿ ಕದಂಬಶೈಲಿಯೂ ಒಂದಿತ್ತೇ ಎಂಬುದು ಸಂದೇಹಾಸ್ಪದ. ಆನಂತರದ ಕದಂಬ ಅರಸರ ಅಳ್ವಿಕೆಯಲ್ಲಿ ಅನೇಕ ಕಟ್ಟಡಗಳು ನಿರ್ಮಿತವಾಗಿದ್ದರೂ ಅವುಗಳಲ್ಲಿ ಬಹುತೇಕ ಸಮಕಾಲೀನ ಹೊಯ್ಸಳ ಚಾಳುಕ್ಯ ಶೈಲಿಯ ಪ್ರಭಾವವೇ ಕಾಣುತ್ತದೆ. ಆದರೆ ಕದಂಬ ಕಟ್ಟಡಗಳಲ್ಲಿ ಅವುಗಳದೇ ಆದ ವೈಶಿಷ್ಟ್ಯಗಳಿವೆ. ಆದ್ದರಿಂದ ವಾಸ್ತುಶಿಲ್ಪ ಪರಂಪರೆಯಲ್ಲಿ ಕದಂಬ ಶೈಲಿ ಎಂಬ ಪ್ರಕಾರವನ್ನು ಗುರುತಿಸಬೇಕು ಎಂಬುದು ಮೋರೇಸ್ ಅಭಿಪ್ರಾಯ. ಸಖನಾಸಿ ಗರ್ಭಗುಡಿಗಿಂತ ಅಗಲವಾಗಿರುವುದು, ವಿವಿಧರೀತಿಯ ಜಾಲಂದ್ರಗಳ ಅಳವಡಿಕೆ, ಚಾವಣಿಯ ಸುತ್ತ ಚಪ್ಪಡಿಗಳನ್ನು ಇಳಿಜಾರಾಗಿ ಜೋಡಿಸಿ ಮಾಡಿದ ಕಪೋತ ಮತ್ತು ಕದಂಬನಾಗರವೆಂಬ ಶಿಖರರೀತಿ-ಇವು ಮೋರೇಸ್ ಪ್ರಕಾರ ಕದಂಬಶೈಲಿಯ ವೈಶಿಷ್ಟ್ಯಗಳು. ಚತುರಸ್ರಾಕಾರದ ಗೋಡೆಯ ಮೇಲೆ ಕದಂಬ ನಾಗರಶಿಖರ ಪಿರಮಿಡ್ಡಿನಾಕೃತಿಯಲ್ಲಿ ಮೆಟ್ಟಲು ಮೆಟ್ಟಲಾಗಿ ಮೇಲೆ ಹೋದಂತೆ ಚಿಕ್ಕದಾಗುವ ಚಪ್ಪಟೆ ಸ್ತರಗಳಿಂದ ಎತ್ತಲ್ಪಟ್ಟಿದ್ದು ಮೇಲೆ ಕಳಶ ಹೊಂದಿರುತ್ತದೆ. ಶಿಖರದ ಮೇಲೆ ಯಾವ ರೀತಿಯ ಶಿಲ್ಪಗಳೂ ಇರುವುದಿಲ್ಲ. ಎಲ್ಲೋ ಕೆಲವು ಸಲ ಅಂಚುಗಳನ್ನು ಹಲ್ಲಿನಾಕೃತಿಯಲ್ಲಿ ಬಿಡಿಸಿರುವುದಪ್ಟೇ ಈ ಶಿಖರ ರೀತಿಯ ಅಲಂಕರಣ. ಕದಂಬ ವಾಸ್ತುಶಿಲ್ಪ ಶೈಲಿಯ ಬೆಳೆವಣಿಗೆಯನ್ನು ಕ್ರಮವಾಗಿ ಹಲ್ಸಿಯ ಜೈನಬಸ್ತಿ, ಮಲಪ್ರಭಾ ದಂಡೆಯ ಕದರೋಲಿಯ ಗುಡಿ, ಹಲ್ಸಿಯ ಹತ್ತಿಕೇಶ್ವರ, ಕಲ್ಲೇಶ್ಚರ, ಸುವಣ್ಙೇಶ್ವರ ಮತ್ತು ರಾಮೇಶ್ವರ ದೇವಾಲಯಗಳು, ಅನಂತರ ಯಲವತ್ತಿಯ ಹಿಂದೂ ಮತ್ತು ಜೈನಗುಡಿ ಗಳಲ್ಲಿಯೂ ಈ ಶೈಲಿಯ ಪರಮೋಚ್ಚ ಕೃತಿಯನ್ನು ಬೆಳಗಾಂ ಜಿಲ್ಲೆಯ ದೇಗಾಂವೆಯ ಕಮಲಾನಾರಾಯಣ ದೇವಾಲಯದಲ್ಲಿ ಕಾಣಬಹುದೆಂದೂ ಮೋರೇಸ್ ಬರೆವಣಿಗೆಯಿಂದ ತಿಳಿದುಬರುತ್ತದೆ.

ಕದಂಬ ಶಿವಚಿತ್ತನ (1148-81) ಪತ್ನಿ ಕಮಲಾದೇವಿಯ ಆಜ್ಞೆಯಿಂದ ತಿಪ್ಪೋಜನೆಂಬುವನು ದೇಗಾಂವೆಯ ಕಮಲಾನಾರಾಯಣ ದೇವಾಲಯವನ್ನು ಕಟ್ಟಿದನೆಂದು ಅಲ್ಲಿಯ ಒಂದು ಶಾಸನ ತಿಳಿಸುತ್ತದೆ. ಈ ದೇವಾಲಯ ಒಂದು ತ್ರಿಕೂಟಾಚಲ. ಮೂರು ದಿಕ್ಕುಗಳಲ್ಲಿ ದೇವಗೃಹಗಳು ಮತ್ತು ಇನ್ನೊಂದೆಡೆ ದ್ವಾರ ಇದ್ದು, ಇವೆಲ್ಲ ಮಧ್ಯದ ಮಂಟಪಕ್ಕೆ ತೆರೆದಂತಿವೆ. ದೇವಗೃಹಗಳಲ್ಲೊಂದೊಂದರಲ್ಲೂ ಒಂದು ಗರ್ಭಗೃಹ ಮತ್ತು ಸುಖನಾಸಿ ಇವೆ. ಸುಖನಾಸಿ ಮತ್ತು ಗರ್ಭಗೃಹದ ಬಾಗಿಲ ವಾಡಗಳು ಬಲು ನಾಜೂಕಾಗಿ ಶಿಲ್ಪಿತವಾಗಿವೆ. ಸುಖನಾಸಿಯ ಬಾಗಿಲುಗಳನ್ನು ಕಲಾತ್ಮಕವಾಗಿ ಕೆತ್ತಿದ ಜಾಲಂದ್ರಗಳ ಚೌಕಟ್ಟಿನ ಮಧ್ಯದಲ್ಲಿರಿಸಲಾಗಿದೆ. ದೇವಾಲಯದ ಹೊರಗೋಡೆಯ ಮೇಲೆ ಕದಂಬ ನಾಗರರೀತಿಯ ಶಿಖರವನ್ನು ಹೊತ್ತಿರುವ ಜೋಡಿ ಅರೆಗಂಬಗಳ ಅಲಂಕರಣವಿದೆ. ಮೇಲಿನ ಕೈಪಿಡಿಯಲ್ಲಿ ಶಿಖರಗಳನ್ನು ಹೊತ್ತು ಸೆಟೆದುನಿಂತ ಸಿಂಹಗಳೂ ಅವುಗಳ ಮಧೈ ನೃತ್ಯಬಾಲಿಕೆಯರ ವಿಗ್ರಹಗಳೂ ಇವೆ. ಅಲಂಕರಣ, ಸ್ತಂಭರೀತಿ ಮುಂತಾದವುಗಳಲ್ಲಿ ಸಮಕಾಲೀನ ಚಾಳುಕ್ಯ-ಹೊಯ್ಸಳ ಶೈಲಿಯ ಪ್ರಭಾವ ಎದ್ದು ಕಾಣುತ್ತದೆ. ಒಟ್ಟಿನಲ್ಲಿ ಶೈಲಿ ಯಾವುದಾದರೂ ಇರಲಿ ದೇಗಾಂವೆಯ ಕಮಲಾನಾರಾಯಣ ಗುಡಿ ಕರ್ನಾಟಕದ ಸುಂದರ ದೇವಾಲಯ ಗಳಲ್ಲೊಂದೆಂಬುದರಲ್ಲಿ ಸಂದೇಹವಿಲ್ಲ. ಅಲ್ಲದೆ, ಕದಂಬ ವಾಸ್ತುಶಿಲ್ಪ ಶೈಲಿಯ ಬೆಳೆವಣಿಗೆಯ ಕೊನೆಯ ಘಟ್ಟವನ್ನೂ ಈ ಗುಡಿ ಸೂಚಿಸುತ್ತದೆ. ಅನಂತರ ಅನತಿ ಕಾಲದಲ್ಲಿಯೇ ಕದಂಬರಾಜ್ಯವೂ ಹಾಗೆಯೇ ಕದಂಬ ಶೈಲಿಯೂ ಕೊನೆಗೊಂಡುವು. ಆದರೆ ಹೊಯ್ಸಳ ಮತ್ತು ವಿಜಯನಗರದ ಅರಸರ ಕಾಲದ ಕಟ್ಟಡಗಳಲ್ಲೂ ಒಮ್ಮೊಮ್ಮೆ ಅಪರೂಪವಾಗಿ ಕದಂಬ ವಾಸ್ತುಶಿಲ್ಪದ ಕೆಲವು ಅಂಶಗಳು ಕಂಡುಬರುವುದುಂಟು.

 ಶಿಲ್ಪ  
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಜಂಬೆಹಳ್ಳಿಯಲ್ಲಿರುವ ದುರ್ಗಾವಿಗ್ರಹ ಇದುವರೆಗೆ ದೊರಕಿರುವ ಕದಂಬ ಶಿಲ್ಪಗಳಲ್ಲಿ ಅತ್ಯಂತ ಪ್ರಾಚೀನವಾದದ್ದು. ಜಂಬೆಹಳ್ಳಿಯ ದೇವಾಲಯದ ಮುಂದಿರುವ ಶಾಸನವೊಂದರಿಂದ ಆ ಗುಡಿ ಕದಂಬ ಶಾಂತಿವರ್ಮನ ಕಾಲದಲ್ಲಿ ಕನ್ನಮ್ಮ ಕಟ್ಟಿಸಿದ್ದೆಂದು ತಿಳಿಯುತ್ತದೆ. ಈಗ ದೇವಾಲಯ ಹಾಳಾಗಿದ್ದರೂ ಅಲ್ಲಿಯ ಮೂರ್ತಿಶಿಲ್ಪ ಕದಂಬರ ಕಾಲದ್ದೆಂದೇ ಹೇಳಬಹುದು. ಈ ಶಿಲ್ಪದಲ್ಲಿರುವ ಚತುರ್ಭುಜ ಮಹಿಷಮರ್ದಿನಿ ಪ್ರಾಣಿಯಾಕೃತಿಯಲ್ಲಿರುವ ಅಸುರನನ್ನು ಮೆಟ್ಟಿ ಎಡಗೈಯಲ್ಲಿ ಎಮ್ಮೆಯ ಕಾಲೊಂದನ್ನು ಹಿಡಿದೆತ್ತಿದ್ದಾಳೆ. ಇತರ ಕೈಗಳಲ್ಲಿ ಶಂಖ, ಕತ್ತಿ, ತ್ರಿಶೂಲಗಳಿವೆ. ದೇವಿಯ ಸುಂದರ ಮುಖ, ಆಯುಧಗಳನ್ನು ಹಿಡಿದಿರುವ ರೀತಿ, ನಿರಾಯಾಸವಾಗಿ ಅಸುರನನ್ನು ಮೆಟ್ಟಿ ಕೊಲ್ಲುತ್ತಿರುವ ಭಾವ ಮುಂತಾದವು ಸ್ಫುಟವಾಗಿ ವ್ಯಕ್ತವಾಗಿವೆ. ಇದು ಒಂದು ಉತ್ತಮ ಕಲಾಕೃತಿ. ಆನಂತರದ ಕದಂಬರ ಕಾಲದ ಇತರ ಶಿಲ್ಪಗಳು ಹಲ್ಸಿ, ದೇಗಾಂವೆ ಮತ್ತು ಹಾನುಗಲ್ಲುಗಳಲ್ಲಿವೆ. ಇವುಗಳೆಲ್ಲದರಲ್ಲೂ ಚೂಪು ತಲೆಯ ಪ್ರಭಾವಳಿ ಸಾಮಾನ್ಯವಾಗಿರುತ್ತದೆ. ಹಲ್ಸಿಯ ಲಕ್ಷ್ಮೀನಾರಾಯಣನ ವಿಗ್ರಹದಲ್ಲಿ ಲಕ್ಷ್ಮಿ ವಿಷ್ಣುವಿನ ತೊಡೆಯ ಮೇಲೆ ಕುಳಿತಿದ್ದಾಳೆ. ಪ್ರಭಾವಳಿಯಲ್ಲಿ ದಶಾವತಾರಗಳನ್ನು ಕೆತ್ತಲಾಗಿದೆ. ಸು. 1147ರಲ್ಲಿ ರಚಿತವಾದ ಹಾನುಗಲ್ಲಿನ ಮಾಧವ ದೇವಾಲಯದಲ್ಲಿರುವ ಒಂದು ವಿಷ್ಣು ವಿಗ್ರಹ ಬಲುಮೋಹಕ ಶಿಲ್ಪ. ಬೆಳಗಾಮಿ ಗಂಡಭೇರುಂಡ (1047) ಮತ್ತು ಅದರ ಬಳಿಯೇ ಇರುವ ಶೂಲ ಬ್ರಹ್ಮ (1060) ಶಿಲ್ಪಗಳು ಮೇಲ್ಮಟ್ಟದ ಕಲಾಕೃತಿಗಳು.
ಶಾಸನಗಳು : ಮೊದಲ ಕದಂಬ ವಂಶಕ್ಕೆ ಸೇರಿದ ಶಾಸನಗಳಲ್ಲಿ ಹೆಚ್ಚಿನವು ತಾಮ್ರಪಟಗಳು. ಇವು ಮೈಸೂರು, ಹಾಸನ, ಕಡೂರು, ಶಿವಮೊಗ್ಗ, ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲೆಗಳಲ್ಲಿ ದೊರಕಿವೆ. ಕದಂಬರ ತಾಮ್ರಪಟಗಳಲ್ಲಿ, ಓಲೆಗರಿಯ ರೀತಿಯ ತೆಳುವಾದ ಆಯಾಕಾರದ ತಾಮ್ರದ ಹಲಗೆಗಳ ಮೇಲೆ ಬರಹವಿದ್ದು, ಎರಡು ಅಥವಾ ಅದಕ್ಕೂ ಹೆಚ್ಚಿನ ಸಂಖ್ಯೆಯ ಹಲಗೆಗಳು ಅವುಗಳ ಒಂದು ಕೊನೆಯಲ್ಲಿರುವ ದುಂಡು ತೂತಿನ ಮೂಲಕ ತಾಮ್ರದ ಉಂಗುರದಿಂದ ಪೋಣಿಸಲ್ಪಟ್ಟಿರುತ್ತವೆ. ತಾಮ್ರದ ಉಂಗುರದ ಮೇಲೆ ಕದಂಬರ ರಾಜಚಿಹ್ನೆಯಾದ ಸಿಂಹಮುದ್ರೆ ಇರುತ್ತದೆ. ಇವುಗಳಲ್ಲಿರುವ ಲಿಪಿ ಬಹುತೇಕ ಪೆಟ್ಟಿಗೆಯ ತಲೆಯ ಬ್ರಾಹ್ಮಿ, ಭಾಷೆ ಸಂಸ್ಕೃತ ಗದ್ಯ. ಈ ತಾಮ್ರಪಟಗಳೆಲ್ಲ ದಾನಶಾಸನಗಳು. ಅದರೂ, ದಾನಕೊಡುವ ರಾಜನ ಮತ್ತು ಅವನ ವಂಶದ ವಿವರಣೆ ಇವುಗಳಲ್ಲಿರುವುದರಿಂದ ಇವು ಅಮೂಲ್ಯ ಚಾರಿತ್ರಿಕ ದಾಖಲೆಗಳು. ಇದುವರೆಗೆ ಮೊದ¯ ಕದಂಬರಲ್ಲಿ ಮೃಗೇಶ ವರ್ಮ ಮತ್ತು ಅವನ ಅನಂತರದ ಅರಸರ ತಾಮ್ರಶಾಸನಗಳು ಮಾತ್ರ ದೊರಕಿವೆ.
ಈ ಕಾಲದ ಶಿಲಾಶಾಸನಗಳು ಚಿತ್ರದುರ್ಗ ಜಿಲ್ಲೆಯ ಚಂದ್ರವಳ್ಳಿ, ಶಿವಮೊಗ್ಗ ಜಿಲ್ಲೆಯ ಮಳವಳ್ಳಿ ಮತ್ತು ತಾಳಗುಂದ, ಉತ್ತರ ಕನ್ನಡ ಜಿಲ್ಲೆಯ ಹಲ್ಮಿಡಿ, ಬನವಾಸಿ ಮುಂತಾದೆಡೆಗಳಲ್ಲಿ ಬೆಳಕಿಗೆ ಬಂದಿವೆ. ಇವುಗಳ ಲಿಪಿಯೂ ಬ್ರಾಹ್ಮಿಯೇ. ಮಳವಳ್ಳಿ ಮತ್ತು ಚಂದ್ರವಳ್ಳಿ ಶಾಸನಗಳ ಭಾಷೆ ಪ್ರಾಕೃತ. ತಾಳಗುಂದ ಶಾಸನ ಸಂಸ್ಕೃತದಲ್ಲಿ ಪದ್ಯರೂಪದಲ್ಲಿದೆ. ಹಲ್ಮಿಡಿ ಶಾಸನ ಕನ್ನಡದಲ್ಲಿ ಗದ್ಯರೂಪದಲ್ಲಿದೆ. ಈ ಶಿಲಾಶಾಸನಗಳ ಉದ್ದೇಶ ಬೇರೆಬೇರೆಯಾದವು. ಚಂದ್ರವಳ್ಳಿ ಮತ್ತು ತಾಳಗುಂದ ಶಾಸನಗಳು ತಟಾಕ ನಿರ್ಮಾಣವನ್ನು ಹೇಳಿದರೆ, ಹಲ್ಮಿಡಿ ಶಾಸನ ದಾನವನ್ನು ನಿರೂಪಿಸುತ್ತದೆ. ತಾಮ್ರಶಾಸನಗಳಂತೆ ಈ ಶಿಲಾಶಾಸನಗಳೂ ಚರಿತ್ರೆಯ ಮೇಲೆ ಬೆಳಕು ಚೆಲ್ಲುತ್ತವೆ. ಅಲ್ಲದೆ ಹಲವು ಶಾಸನಗಳು ಭಾಷಾ ಸಾಹಿತ್ಯ ದೃಷ್ಟಿಯಿಂದಲೂ ಮುಖ್ಯವಾದವು. ಚಂದವಳ್ಳಿ ಮತ್ತು ಮಳವಳ್ಳಿ ಶಾಸನಗಳು ಕರ್ನಾಟಕದಲ್ಲಿ ಪ್ರಚಲಿತವಿದ್ದ ಪ್ರಾಕೃತಭಾಷೆಯನ್ನು ಪರಿಚಯ ಮಾಡಿಕೊಟ್ಟರೆ, ಹಲ್ಮಿಡಿ ಶಾಸನ ಪ್ರ.ಶ. 5ನೆಯ ಶತಮಾನದಲ್ಲಿ ರೂಢವಾಗಿದ್ದ ಕನ್ನಡ ಭಾಷೆಯ ಸ್ವರೂಪವನ್ನು ತೋರಿಸಿ ಕೊಡುತ್ತದೆ. ಈಗ ಗೊತ್ತಿರುವವುಗಳಲ್ಲಿ ಇದೇ ಅತ್ಯಂತ ಪ್ರಾಚೀನ ಕನ್ನಡ ಶಾಸನ. ಹಾಗೆಯೇ ತಾಳಗುಂದ ಶಾಸನವೂ ಕರ್ಣಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನವಾಗಿದೆ. ಅಲ್ಲದೆ ಆ ಶಾಸನದಲ್ಲಿ, ಅದನ್ನು ರಚಿಸಿದ ಕವಿ ಕುಬ್ಜನ ಹೆಸರೂ ಇದೆ. ಕುಬ್ಜನೇ ಈಗ ಗೊತ್ತಿರುವಂತೆ ಕರ್ನಾಟಕದ ಕವಿಗಳಲ್ಲಿ ಅತ್ಯಂತ ಪ್ರಾಚೀನ. ಇತ್ತೀಚೆಗೆ ಮೈಸೂರು ವಿಶ್ವವಿದ್ಯಾನಿಲಯದ ಪುರಾತತ್ವ ಇಲಾಖೆಯವರು ಬನವಾಸಿಯಲ್ಲಿ ಪತ್ತೆ ಹಚ್ಚಿದ ಮೃಗೇಶವರ್ಮನ ಶಾಸನವೇ ಕದಂಬರ ರಾಜಧಾನಿಯಲ್ಲಿ ದೊರಕಿರುವ ಮೊಟ್ಟ ಮೊದಲನೆಯ ಶಾಸನ. ಪೆಟ್ಟಿಗೆ ತಲೆಯ ದಾಕ್ಷಿಣಾತ್ಮ ಲಿಪಿಯಲ್ಲಿರುವ ಈ ಶಾಸನವನ್ನು ಬಲು ಸುಂದರವಾದ ಚತುರ್ಮುಖ ಶಿಲಾಸ್ತಂಭದ ಮೇಲೆ ಕೆತ್ತಲಾಗಿದೆ.

ಹಾನುಗಲ್ಲು, ಗೋವ ಮುಂತಾದೆಡೆಗಳಲ್ಲಿ ಆಳಿದ ಅನಂತರದ ಕದಂಬ ಶಾಖೆಗಳ ಅರಸರ ಶಿಲಾ ಮತ್ತು ತಾಮ್ರಶಾಸನಗಳು ಕರ್ನಾಟಕದ ಶಿವಮೊಗ್ಗ-ಚಿತ್ರದುರ್ಗ, ಉತ್ತರ ಕನ್ನಡ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲೂ ಗೋವದಲ್ಲೂ ಮಹಾರಾಷ್ಟ್ರದ ಸತಾರ, ರತ್ನಗಿರಿ ಮತ್ತು ಠಾಣಾ ಜಿಲ್ಲೆಗಳಲ್ಲೂ ದೊರಕಿವೆ. ಆದರೆ ಕದಂಬ ರಾಜ್ಯದಲ್ಲಿ ಉತ್ತರಕ್ಕೆ ಹೋದಂತೆ ನಾಗರೀಲಿಪಿಯ ಸಂಸ್ಕೃತ ಶಾಸನಗಳೂ ದೊರಕುವುದುಂಟು. ಈ ಶಾಸನಗಳೆಲ್ಲ ಹೆಚ್ಚಾಗಿ ದಾನಶಾಸನಗಳೋ ವೀರಗಲ್ಲುಗಳೋ ಆಗಿರುತ್ತವೆ. ಇವು ಸಮಕಾಲೀನ ರಾಜಕೀಯ ಸಾಮಾಜಿಕ ಧಾರ್ಮಿಕ ಆರ್ಥಿಕ ಆಗುಹೋಗುಗಳ ಬಗ್ಗೆ ಬಹಳ ಬೆಳಕು ಚೆಲ್ಲುತ್ತವೆ. ಕೆಲವು ಶಾಸನಗಳನ್ನು ಉತ್ತಮ ಕಾವ್ಯ ರಚನೆಗಳೆಂದೂ ಕರೆಯಬಹುದು.

 ನಾಣ್ಯಗಳು  
ಮೊದಲ ಕದಂಬ ಅರಸರ ಕಾಲಕ್ಕೆ ಖಚಿತವಾಗಿ ಸೇರುವ ನಾಣ್ಯಗಳು ಇದುವರಿಗೆ ದೊರಕಿಲ್ಲ. ಆದರೆ ಪುಟ್ಟ ಬಟ್ಟಲಾಕಾರದ ಕೆಲವು ಚಿನ್ನದ ನಾಣ್ಯಗಳು ಈ ಕಾಲದವೆಂದು ಕೆಲವರ ಅಭಿಪ್ರಾಯ. ಇವನ್ನು ಪದ್ಮಟಂಕ ಎಂದು ಕರೆಯುತ್ತಾರೆ. ದುಂಡಗಿರುವ ಈ ನಾಣ್ಯಗಳು 0.6"-0.8" ವ್ಯಾಸವಿದ್ದು, 52-70 ಗ್ರೇನ್ ತೂಗುತ್ತವೆ. ಸಾಮಾನ್ಯವಾಗಿ 52 ಮತ್ತು 66 ಗ್ರೇನ್ಗಳವೇ ಹೆಚ್ಚು. ಇವುಗಳ ತಗ್ಗಿನ ಕಡೆಯಲ್ಲಿ ಅಂಕನ ಮಾಡಿದ ಪದ್ಮದ ಚಿತ್ರವೂ ಸುತ್ತಲೂ ನಾಲ್ಕು ಸಣ್ಣ ಚಿಹ್ನೆಗಳೂ ಇರುತ್ತವೆ. ಮೊದಮೊದಲು ಎರಡು ಶ್ರೀಕಾರಗಳು, ಶಂಖ ಮತ್ತು ಬಿಲ್ಲು ಇವೇ ಆ ಸಣ್ಣ ಚಿಹ್ನೆಗಳಾಗಿರುತ್ತಿದ್ದುವು. ಅನಂತರದ ಪದ್ಮಟಂಕಗಳಲ್ಲಿ ಇವುಗಳ ಬದಲು ನಾಲ್ಕು ಸಣ್ಣ ಸಿಂಹಗಳು ಕಾಣುತ್ತವೆ. ಹಿಂಭಾಗದಲ್ಲಿ ಯಾವ ಚಿಹ್ನೆಗಳೂ ಇರುವುದಿಲ್ಲ. ಇವುಗಳ ಮೇಲೆ ಯಾವ ಬರೆಹಗಳೂ ಇಲ್ಲದಿರುವುದರಿಂದ, ಇವು ಕದಂಬರೇ ಹೊರಡಿಸಿದವೆಂದು ನಿರ್ದಿಷ್ಟವಾಗಿ ಹೇಳುವುದು ಕಷ್ಟ. ಆನಂತರದ ಕದಂಬ ಕುಲಗಳ ಅನೇಕ ಚಿನ್ನದ ನಾಣ್ಯಗಳು ಉತ್ತರ ಕರ್ನಾಟಕ ಮತ್ತು ಗೋವ ಪ್ರದೇಶಗಳಲ್ಲಿ ದೊರಕಿವೆ. ಇವೂ ದುಂಡಗೆ ಸು. 0.8 ಅಥವಾ 0.9 ಅಂಗುಲ ಅಗಲವಿದ್ದು ತೂಕದಲ್ಲಿ ಸು. 66 ಗ್ರೇನ್ಗಳಿರುತ್ತವೆ. ಪದ್ಮಟಂಕಗಳಂತೆ ಇವುಗಳಲ್ಲಿ ಅಂಕನ ಚಿಹ್ನೆಗಳಿರದೆ ನಾಣ್ಯಗಳು ಪುರ್ತವಾಗಿ ಅಚ್ಚು ಹೂಯ್ದವುಗಳಾಗಿರುತ್ತವೆ. ಬಹುನಾಜೂಕಾಗಿ ಮಾಡಿರುವ ಈ ನಾಣ್ಯಗಳಲ್ಲಿ ಮುಂಭಾಗದಲ್ಲಿ ಸಿಂಹದ ಚಿತ್ರವೂ ನಾಣ್ಯವನ್ನು ಹೊರಡಿಸಿದ ಸಂವತ್ಸರದ ಹೆಸರೂ ಹಿಂಬದಿಯಲ್ಲಿ ಬಿರುದಾವಳಿಸಹಿತವಾದ ರಾಜನ ಹೆಸರೂ (ನಾಗರೀ ಲಿಪಿಯಲ್ಲಿ ಇವೆ. ಉದಾಹರಣೆಗೆ ಕದಂಬ ಜಯಕೇಶಿಯ ಒಂದು ನಾಣ್ಯದಲ್ಲಿ ಮುಂಭಾಗದ ಸಿಂಹದ ಚಿತ್ರದ ಪಕ್ಕದಲ್ಲಿ ಪ್ರಮೋದ ಎಂದೂ ಹಿಂಭಾಗದಲ್ಲಿ ನಾಲ್ಕು ಸಾಲುಗಳಲ್ಲಿ ಶ್ರೀ ಸಪ್ತಕೋಟೀಶ್ವರ ಲಬ್ಧ ವರ ವೀರ ಜಯಕೇಶಿದೇವ ಮೇವರ ಮಾರಿ ಎಂದೂ ಇರುವುದನ್ನು ಚಿತ್ರದಲ್ಲಿ ನೋಡಬಹುದು.                                    	(ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ